ಪಿಟ್ಟ ಹಕ್ಕಿ -
ಏವೀಸ್ ವಿಭಾಗದ ಪ್ಯಾಸರಿಫಾರ್ಮೀಸ್ ಗಣದ ಪಿಟ್ಟಿಡೀ ಕುಟುಂಬಕ್ಕೆ ಸೇರಿದ ಸುಂದರ ಹಾಗೂ ವರ್ಣರಂಜಿತ ಹಕ್ಕಿ. ಪಿಟ್ಟ ಇದರ ಶಾಸ್ತ್ರೀಯ ಹೆಸರು. ಕನ್ನಡದಲ್ಲಿ ಇದನ್ನು ನವರಂಗ ಎಂದು ಕರೆಯುತ್ತಾರೆ. ಇದರಲ್ಲಿ ಸುಮಾರು 23 ಪ್ರಭೇದಗಳಿವೆ. ಆಫ್ರಿಕದಲ್ಲಿ ಎರಡು ಪ್ರಭೇದಗಳು ಮಾತ್ರ ಕಾಣದೊರೆಯುತ್ತದೆ. ಬಹುಪಾಲು ಪಕ್ಷಿಗಳು ಬೋರ್ನಿಯೊ ಮತ್ತು ಸುಮಾತ್ರ ಪ್ರದೇಶಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಪಿಟ್ಟ ಬ್ರ್ಯಾಕಿಯೂರ ಎಂಬ ಪ್ರಭೇದ ಉಂಟು.

15-30 ಸೆಂ.ಮೀ. ಉದ್ದದ ಗುಂಡುಮೈಯಿನ ಹಕ್ಕಿಗಳಿವು. ಬಲಯುತವಾದ ನಸುಬಗ್ಗಿದ ಕೊಕ್ಕು, ಮೋಟು ಕತ್ತು, ಪುಟ್ಟ ರೆಕ್ಕೆಗಳು, ನೀಳವಾದ ದೃಢವಾದ ಕಾಲುಗಳು, ಹಸುರು, ನೀಲಿ, ಕೆಂಪು, ಕಪ್ಪು, ಬಿಳಿ ಮುಂತಾದ ಹಲವು ಬಣ್ಣಗಳ ಪುಕ್ಕಗಳು, ಬಲು ಮೋಟಾದ ಬಾಲ-ಇವು ಪಿಟ್ಟ ಹಕ್ಕಿಗಳ ಪ್ರಧಾನ ಲಕ್ಷಣಗಳು. ಹೆಣ್ಣು ಗಂಡುಗಳೆರಡು ನೋಡಲು ಒಂದೇ ತೆರನಾಗಿವೆಯಾದರೂ ಹೆಣ್ಣಿನ ಬಣ್ಣ ಗಂಡಿನದರಷ್ಟು ಉಜ್ವಲವಲ್ಲ. ಪಿಟ್ಟ ಹಕ್ಕಿಗಳು ಒಂಟೊಂಟಿಯಾಗಿ ನೆಲದ ಮೇಲೆ ಹಾಗೂ ಕುರುಚಲು ಗಿಡಗಳ ನಡುವೆ ವಾಸಿಸುತ್ತವೆ. ಇವು ಸ್ಥಾನಿಕವಾಗಿರಬಹುದು ಅಥವಾ ಸ್ಥಳೀಯವಾಗಿ ವಲಸೆ ಹೋಗಬಹುದು. ಇವು ಹೆಚ್ಚಾಗಿ ನೆಲದ ಮೇಲೆಯೇ ಕಾಲ ಕಳೆಯುವವು. ಕೀಟಗಳೇ ಪ್ರಧಾನ ಆಹಾರ. ನೆಲದ ಮೇಲೆ ಕುಪ್ಪಳಿಸುತ್ತ, ತರಗಲೆಗಳನ್ನು, ಹಸಿಮಣ್ಣನ್ನು ಕೆದಕಿ ಕೀಟಗಳು ಮತ್ತು ಹುಳು ಹುಪ್ಪಟೆಗಳನ್ನು ಹಿಡಿದು ತಿನ್ನುತ್ತವೆ. ಆಸ್ಟ್ರೇಲಿಯಾದಲ್ಲಿ ಕಾಣಸಿಗುವ ನಾಯ್ಸಿ ಪಿಟ್ಟ ಎಂಬುದು ಬಸವನ ಹುಳುಗಳನ್ನು ತಿನ್ನುತ್ತದೆ. ಪಿಟ್ಟ ಹಕ್ಕಿಗಳು ಕಡ್ಡಿ, ಹುಲ್ಲು, ಬೇರುಗಳಿಂದ ನೆಲದ ಮೇಲೆ, ಪೊದೆಗಳ ನಡುವೆ ಅಥವಾ ಮರದ ಕವಲುಗಳಲ್ಲಿ ಗೋಳದ ಆಕಾರದ ಗೂಡುಗಳನ್ನು ಕಟ್ಟಿ 4-6 ಬಿಳಿಯ ಬಣ್ಣದ ಮೊಟ್ಟೆಗಳನ್ನಿಡುತ್ತವೆ. ಗಂಡು ಹೆಣ್ಣುಗಳೆರಡೂ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡುವವು.

ಭಾರತದ ಪಿಟ್ಟ ಹಕ್ಕಿ ಮೈನಾ ಹಕ್ಕಿಯ ಗಾತ್ರದ್ದು. ಕಂದು, ಕಪ್ಪು, ಬಿಳಿ, ನೀಲಿ, ಹಸುರು, ಬಣ್ಣಗಳ ಗರಿಗಳಿಂದ ತುಂಬ ಚೆಲುವಾಗಿ ಕಾಣುತ್ತದೆ. ಬಾಲದ ಬುಡ ಕೆಂಪು ಬಣ್ಣದ್ದು. ಇದು ಮೊಟ್ಟೆ ಇಡುವ ಕಾಲ ಮೇ-ಆಗಸ್ಟ್.

(ಎಚ್.ಎಚ್.ಎಸ್.)
(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ